ಕುಂಭಮೇಳ

  ಹಿಂದೂ ಧಾರ್ಮಿಕ ಸಂಪ್ರದಾಯಕ್ಕೆ ಸೇರಿದ ಅತಿ ದೊಡ್ಡ ಮೇಳ. ಉತ್ತರ ಭಾರತದ ಪ್ರಯಾಗ ಮತ್ತು ಹರಿದ್ವಾರಗಳಲ್ಲಿ ನಡೆಯುವ ಈ ಮೇಳದಲ್ಲಿ ಹೆಚ್ಚಾಗಿ ಸಂನ್ಯಾಸಿಗಳು ಭಾಗವಹಿಸುವರು. ಭಾರತದ ಎಲ್ಲ ಕಡೆಗಳಿಂದಲೂ ಲಕ್ಷಾಂತರ ಯಾತ್ರಿಕರು ಇಲ್ಲಿಗೆ ಬರುತ್ತಾರೆ. ಗಂಗಾ, ಯಮುನಾ ಮತ್ತು ಸರಸ್ವತೀ ನದಿಗಳು ಸೇರುವ ತ್ರಿವೇಣಿ ಸಂಗಮವಾದ ಪ್ರಯಾಗವೇ ಕುಂಭಮೇಳದ ಕೇಂದ್ರ. ಇಲ್ಲಿ ಎರಡು ಬಗೆಯ ಮೇಳಗಳು ನಡೆಯುತ್ತವೆ.  ವರ್ಷಂಪ್ರತಿ ನಡೆಯುವ ಮೇಳಕ್ಕೆ ಮಾಷ್ ಮೇಳವೆನ್ನುತ್ತಾರೆ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮೇಳಕ್ಕೆ ಕುಂಭಮೇಳವೆನ್ನುತ್ತಾರೆ. ಸೂರ್ಯ ಮೇಷ, ಗುರು ಮತ್ತು ಕುಂಭ ರಾಶಿಗಳನ್ನು ಪ್ರವೇಶಿಸಿದ ಅಪೂರ್ವ ಸಮಯದಲ್ಲಿ ಈ ಮೇಳ ನಡೆಯುತ್ತದೆ.

 ಬಿತ್ತನೆ ಕಾಲದಲ್ಲಿ ಒಳ್ಳೆಯ ಫಸಲು ಪಡೆಯಲು ಒಂದು ಫಲೋತ್ಪಾದಕ ಹಬ್ಬವನ್ನಾಗಿ ಇದನ್ನು ಉತ್ತರಭಾರತದಲ್ಲಿ ಆಚರಿಸುತ್ತಿದ್ದರೆಂದು ಕಾಣಬರುತ್ತದೆ. ಸಾಮಾನ್ಯವಾಗಿ ಈ ಹಬ್ಬಗಳು ನದೀ ತೀರದಲ್ಲಿ ನಡೆಯುತ್ತಿದ್ದವು. ಸೂರ್ಯ ಕುಂಭರಾಶಿಯನ್ನು ಪ್ರವೇಶಿಸುವ ಪ್ರಶಸ್ತ ಕಾಲದಲ್ಲಿ ಮಡಕೆಯ ತುಂಬ ಬಿತ್ತನೆ ಧಾನ್ಯಗಳನ್ನು ತುಂಬಿಕೊಂಡು ಬಂದ ಜನ ನದೀತೀರದಲ್ಲಿ ಕಲೆತು, ನೀರಿನಲ್ಲಿ ಅವನ್ನು ಅದ್ದಿ ಊರಿಗೆ ತೆಗೆದುಕೊಂಡು ಹೋಗಿ ಅವುಗಳಲ್ಲಿನ ಬೀಜಗಳನ್ನು ಇತರ ಬೀಜಗಳೊಂದಿಗೆ ಬೆರೆಸಿ ಮಾಡುತ್ತಿದ್ದರು. ಈ ರೀತಿ ಮಾಡಿದರೆ ಅತಿ ಹೆಚ್ಚಿನ ಬೆಳೆ ಪಡೆಯಬಹುದೆಂಬ ಬಯಕೆಯೂ ಇಂಥ ಹಬ್ಬಗಳನ್ನು ಆಚರಿಸಲು ಹಿನ್ನಲೆಯಾಗಿರಬೇಕು.          (ಜಿ.ಎಚ್.)

 ದೇವತೆಗಳು ಮತ್ತು ರಾಕ್ಷಸರು ಕ್ಷೀರಸಮುದ್ರವನ್ನು ಕಡೆದಾಗ ಬಂದಂಥ ಅಮೃತದ ಕುಂಭವನ್ನು ರಾಕ್ಷಸರು ಕದ್ದು ಓಡುತ್ತಿರುವಾಗ ದೇವಾಸುರರಲ್ಲಿ ಯುದ್ಧ ನಡೆಯಿತು. ಆ ಸಮಯದಲ್ಲಿ ರಾಕ್ಷಸರು ನಾಲ್ಕು ಸ್ಧಳಗಳಲ್ಲಿ ಆ ಕುಂಭವನ್ನು ಇಟ್ಟರೆಂದು ಒಂದು ಹೇಳಿಕೆಯೂ ನಾಲ್ಕು ಕಡೆ ಅಮೃತವನ್ನು ಚೆಲ್ಲಿದರೆಂದು ಇನ್ನೊಂದು ಹೇಳಿಕೆಯೂ ಪುರಾಣಗಳಲ್ಲಿದೆ.

 ಈ ಮೇಳಗಳ ಪ್ರಾಚೀನತೆ ಬುದ್ಧನ ಕಾಲಕ್ಕೆ ಹೋಗುವುದಾದರೂ ಏಳನೆಯ ಶತಮಾನಕ್ಕೆ ಹಿಂದಿನಿಂದಲೂ ಈ ಮೇಳಗಳು ನಡೆದು ಬರುತ್ತಿರುವುದಕ್ಕೆ ಸಾಕಷ್ಟು ಆಧಾರಗಳಿವೆ. ಚಕ್ರವರ್ತಿ ಶ್ರೀಹರ್ಷ ಚೀನದ ಯಾತ್ರಿಕ ಹ್ಯುಯೆನ್‍ತ್ಸಾಂಗನ್ನು ಅಲಹಾಬಾದಿನಲ್ಲಿ ನಡೆದ ಮೇಳಕ್ಕೆ ಬರಮಾಡಿಕೊಂಡು ಆತನ ಸಮ್ಮುಖದಲ್ಲಿ ಎಲ್ಲ ಧರ್ಮದ ಸಂನ್ಯಾಸಿಗಳಿಗೂ ದೀನದಲಿತರಿಗೂ ಯಥೇಚ್ಚವಾಗಿ ದಾನಧರ್ಮ ಮಾಡಿದನೆಂದು ಇತಿಹಾಸದಿಂದ ತಿಳಿದುಬರುತ್ತದೆ.

 ಅದ್ವೈತದ ಅಧ್ವರ್ಯುಗಳಾದ ಶಂಕರಾಚಾರ್ಯರಿಗೂ ಈ ಮೇಳಕ್ಕೂ ನಿಕಟ ಸಂಬಂಧವಿದೆ ಎನ್ನಲಾಗಿದೆ. ಆಚಾರ್ಯರು ತಮ್ಮ ದಿಗ್ವಿಜಯ ಯಾತ್ರೆಯ ಕಾಲದಲ್ಲಿ ತ್ರಿವೇಣಿ ಸಂಗಮಕ್ಕೆ ಬಂದು ಅಲ್ಲಿನ ಸಂನ್ಯಾಸಿಗಳಲ್ಲಿ ದಶನಾಮೀ ಸಂಪ್ರದಾಯ ಏರ್ಪಡಿಸಿ ಕುಂಭಮೇಳವನ್ನು ವ್ಯವಸ್ಧೆ ಮಾಡಿದರಂತೆ. ಲೋಕಹಿತಕ್ಕಾಗಿ ಶ್ರಮಿಸುವುದು ಈ ದಶನಾಮೀ ಸಂಪ್ರದಾಯದವರ ಗುರಿ. ಈ ಸಂನ್ಯಾಸಿಗಳು ತಮ್ಮ ಇಷ್ಟ ಸಿದ್ಧಿಗಾಗಿ ತಮ್ಮ ಹೆಸರಿನ ಮುಂದೆ ತೀರ್ಥ, ಆಶ್ರಮ, ವನ, ಅರಣ್ಯ, ಗಿರಿ, ಪರ್ವತ, ಸಾಗರ, ಸರಸ್ವತೀ, ಭಾರತೀ, ಪುರೀ ಎಂಬ ಪದಗಳನ್ನು ಸೇರಿಸಿಕೊಳ್ಳುತ್ತಾರೆ. ಕುಂಭಮೇಳಗಳಲ್ಲಿ ಇವರುಗಳ ಪಾತ್ರ ವಿಶಿಷ್ಟವಾದುದು.

 ಕುಂಭಮೇಳಗಳು ಧಾರ್ಮಿಕ ದೃಷ್ಟಿಯಿಂದ ಎಷ್ಟು ಪ್ರಖ್ಯಾತವಾಗಿವೆಯೋ ಅಪಖ್ಯಾತಿಗೂ ಅಷ್ಟೇ ಹೆಸರಾಗಿವೆ. ಕೊಲೆ, ಸುಲಿಗೆ, ಮಾನಭಂಗ, ಅಪಹರಣ ಮುಂತಾದುವುಗಳಿಗೆ ಈ ಮೇಳಗಳು ಪ್ರಸಿದ್ಧಿ ಪಡೆದಿವೆ. ಲಕ್ಷಾಂತರ ಜನ ಇಲ್ಲಿ ಸೇರುವುದರಿಂದ ಪ್ಲೇಗು. ಕಾಲರ ಮುಂತಾದ ಅಂಟುಜಾಡ್ಯಗಳು ಸುಲಭವಾಗಿ ಹರಡುತ್ತವೆ. 1760ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಗೋಸಾಯಿಗಳು ಮತ್ತು ಬೈರಾಗಿಗಳಿಗೆ ಯುದ್ಧವಾಗಿ 18,000ಜನ ಸತ್ತರು. ಅದೇ ಸ್ಧಳದಲ್ಲಿ 1795ರಲ್ಲಿ ಸಿಖ್ ಯಾತ್ರಿಕರು 5,000 ಗೋಸಾಹಿಗಳನ್ನು ಕೊಂದರು.

 ಈ ಮೇಳದ ಒಂದು ಅಂಗವಾಗಿ ಹಿಂದೂ ಪಂಥದ ಎಲ್ಲ ವರ್ಗದ ಬೈರಾಗಿಗಳೂ ಸಂನ್ಯಾಸಿಗಳೂ ಸೇರಿ ಹಿಂದೂ ಧರ್ಮದ ಸಮ್ಮೇಳನ ನಡೆಸುವರು. ಇಲ್ಲಿ ಆಧ್ಯಾತ್ಮಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಮಂಥನ ನಡೆಯುವುದು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ದಿಗಂಬರ ಸಾಧುಗಳ ಮೆರವಣಿಗೆ, ಭಕ್ತಾದಿಗಳ ಕೈಂಕರ್ಯ-ಇವು ಅದ್ದೂರಿಯಾಗಿ ನಡೆಯುತ್ತವೆ.   

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ